ಪಿಯರ್ಸನ್, ಲೆಸ್ವರ್ ಬೋಲ್ಸ್		
1897-1972. ಕೆನಡದ ರಾಜಕಾರಣಿ ; ಪ್ರಧಾನಮಂತ್ರಿಯಾಗಿದ್ದವರು. 1897 ರ ಏಪ್ರಿಲ್ 23 ರಂದು ಟರಾಂಟೋದಲ್ಲಿ ಜನಿಸಿದರು. ಒಂದನೆಯ ಮಹಾಯುದ್ಧದಲ್ಲಿ (1914-18) ಯೋಧರಾಗಿ ಸೇವೆ ಸಲ್ಲಿಸಿದರು. 1924-28 ರಲ್ಲಿ ಟರಾಂಟೋ ವಿಶ್ವವಿದ್ಯಾಲಯದಲ್ಲೂ ಆಕ್ಸ್‍ಫರ್ಡಿನಲ್ಲೂ ಇತಿಹಾಸ ಉಪನ್ಯಾಸಕರಾಗಿದ್ದರು. 1928 ರಲ್ಲಿ ಕೆನಡದ ವಿದೇಶಾಂಗ ಸೇವೆಗೆ ಸೇರಿದ ಪಿಯರ್ಸನ್ನರೂ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಪ್ರಥಮ ಕಾರ್ಯದರ್ಶಿಯಾದರು. 1935 ರಲ್ಲಿ ಇವರು ಲಂಡನ್ನಿನಲ್ಲಿ ಕೆನಡದ ಹೈಕಮಿಷನ ಕಚೇರಿಯಲ್ಲಿ ಸಲಹೆಗಾರರಾದರು. 

1914 ರಲ್ಲಿ ಇವರು ಸ್ವದೇಶಕ್ಕೆ ಹಿಂದಿರುಗಿದರು. 1945-46 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೆನಡದ ರಾಯಭಾರಿಯಾಗಿ ಕೆಲಸ ಮಾಡಿದರು. 1946-48 ರಲ್ಲಿ ವಿಶ್ವಸಂಸ್ಥೆಯಲ್ಲಿ ಕೆನಡವನ್ನು ಪ್ರತಿನಿಧಿಸಿದರು. 1947 ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯ ರಾಜಕೀಯ ಹಾಗೂ ಭದ್ರತಾ ಸಮಿತಿಯ ಅಧ್ಯಕ್ಷರಾಗಿದ್ದರು. 1949 ರಲ್ಲಿ ಇವರು ಲೂಯಿ ಸೆಂಟ್ ಲಾರೆಂಟರ ಲಿಬರಲ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾದರು. ಅಲ್ಗೋಮ ಈಸ್ಟ್‍ನಿಂದ ಕೆನಡದ ಸಂಸತ್ತಿಗೆ ಆಯ್ಕೆಯಾದರು. 1951 ರಲ್ಲಿ ಇವರು ಉತ್ತರ ಅಟ್ಲಾಂಟಿಕ್ ಕೌಲು ಸಂಸ್ಥೆಯ ಅಧ್ಯಕ್ಷರಾಗಿದ್ದರು. 1956 ರಲ್ಲಿ ಸೂಯೆಜ್ ಬಿಕ್ಕಟ್ಟನ್ನು ಪರಿಹರಿಸಲು ನಡೆಸಿದ ಪ್ರಯತ್ನಕ್ಕಾಗಿ ಪಿಯರ್ಸನ್ನರಿಗೆ ಮರುವರ್ಷ ನೊಬೆಲ್ ಶಾಂತಿ ಪಾರಿತೋಷಿಕ ಲಭಿಸಿತು. 1958 ರಲ್ಲಿ ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆ ಹೊಂದಿದ ಪಿಯರ್ಸನ್ನರು 1963 ರಲ್ಲಿ ಕೆನಡದ ಪ್ರಧಾನಮಂತ್ರಿಯಾದರು. 1968 ರಲ್ಲಿ ಇವರು ಪ್ರಧಾನಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಯಿತು. ಇವರು ರಾಜಕೀಯದಿಂದ ನಿವೃತ್ತಿ ಹೊಂದಿದರು. ಪಿಯರ್ಸನ್ನರು 1972 ರ ಡಿಸೆಂಬರ್ 27 ರಂದು ತೀರಿಕೊಂಡರು.								(ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ